ವಿದ್ಯಾನಗರ: ಜ್ಞಾನಸರಸ್ವತಿಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾನ್ವೇಷಣೆ – ಕನ್ನಡ ಅಸ್ಮಿತೆ ನಮ್ಮ ಜವಾಬ್ಧಾರಿ

ಕುಂದಾಪುರ: ಕನ್ನಡ ಭಾಷೆಯಾಗಿ ಎದುರಿಸಿದ, ಎದುರಿಸುತ್ತಿರುವ, ಎದುರಿಸಬೇಕಾದ ಸವಾಲುಗಳಿಗೆ ನಾವೆಲ್ಲರೂ ಉತ್ತರವಾಗಬೇಕಿದೆ. ಆ ಮೂಲಕ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾದ ಜವಬ್ದಾರಿ ನಮ್ಮ ಮೇಲಿದೆ ಎಂದು ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಹೇಳಿದರು.

ಅವರು ಕುಂದಾಪುರ ತಾಲೂಕಿನ ಸಿದ್ಧಾಪುರದ ವಿದ್ಯಾನಗರದಲ್ಲಿರುವ ಜ್ಞಾನಸರಸ್ವತಿ ಪಿಯು ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾನ್ವೇಷಣೆ 2025-26 ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಕಲಾವಿದ ಪ್ರಸಾದ್ ಜೋಗಿ ಮಾತನಾಡಿ, ಕುಂದಾಪುರದ ಮಾತೃಭಾಷೆ ಕುಂದಗನ್ನಡವು ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಮುಖ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್ ಸುರೇಶ್ ಶೆಟ್ಟಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಬದುಕಿನ ವಿಧಾನ. ನಮ್ಮ ನಡೆ ನುಡಿಯ ಮೇಲೆ ನಮ್ಮ ಆಚಾರ ವಿಚಾರ ಸಂಸ್ಕೃತಿಗಳು ಅನಾವರಣಗೊಳ್ಳುತ್ತವೆ. ಹಾಗಾಗಿ ಕನ್ನಡದ ಉಳಿವಿಗೆ ಸದಾ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು. ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಗಣೇಶ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಬಳಿಕ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಅಮರೇಶ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಸಿದರು. ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ್ ಸಿ.ಪಿ, ನಾಗರಾಜ್ ಗುಳ್ಳಾಡಿ ನಿರೂಪಿಸಿದರು.

ಬಳಿಕ ಪ್ರತಿಭಾನ್ವೇಷಣೆ 2025-26 ನಡೆಯಿತು. ತೀರ್ಪುಗಾರರಾದ ಸರ್ಕಾರಿ ಪ್ರೌಢಶಾಲೆ ಸಿದ್ದಾಪುರದ ಚಿತ್ರಕಲಾ ಶಿಕ್ಷಕ ರಾಘವೇಂದ್ರ ಛಾತ್ರಮಕ್ಕಿ, ನಿವೇದಿತಾ ಪ್ರೌಢಶಾಲೆ ಬಸ್ರೂರಿನ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಡಿಯ ಮುಖ್ಯ ಶಿಕ್ಷಕ ಗಣೇಶ್ ರನ್ನು ಗೌರವಿಸಿಲಾಯಿತು. ಕಾಲೇಜಿನ ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a comment

Sign in to post your comment or sine up if you dont have any account.